ಹೋಮಿಯೋಪತಿ
	ಆರೋಗ್ಯವಂತನಲ್ಲಿ ನಿರ್ದಿಷ್ಟ ರೋಗಲಕ್ಷಣಗಳನ್ನು ಉಂಟುಮಾಡಬಲ್ಲ ಔಷಧಿಯನ್ನು ಯುಕ್ತ ಪ್ರಮಾಣದಲ್ಲಿ ಆ ನಿರ್ದಿಷ್ಟ ರೋಗಬಾಧಿತನಿಗೆ ನೀಡಿದರೆ ರೋಗನಿವಾರಣೆ ಆಗುತ್ತದೆ ಎಂಬ ಸಿದ್ಧಾಂತವನ್ನು ಆಧರಿಸಿ ರೂಪಿತವಾದ ವೈದ್ಯಕೀಯ ಚಿಕಿತ್ಸಾ ಪದ್ಧತಿ. ಪುಟ್ಟ ಗುಟ್ಟಿ ಪ್ರಮಾಣ (ಡೋಸೇಜ್) ದೊಡ್ಡದಕ್ಕಿಂತ ಪರಿಣಾಮಕಾರಿ ಎಂಬ ತವನ್ನಾಧರಿಸಿ ಔಷಧಿ ಪ್ರಯೋಗ. ಜರ್ಮನ್ ವೈದ್ಯ ಸ್ಯಾಮ್ಯುಯೆಲ್ ಹಾನಿಮನ್ (1755-1843) ಆವಿಷ್ಕರಿಸಿದ (1796) ಈ ವೈದ್ಯಕೀಯ ಚಿಕಿತ್ಸಾಕ್ರಮವನ್ನು ಆಧುನಿಕ ವೈದ್ಯವಿಜ್ಞಾನ ಒಪ್ಪುವುದಿಲ್ಲವಾದರೂ ಜಗತ್ತಿನ ಬಹುತೇಕ ರಾಷ್ಟ್ರಗಳಲ್ಲಿ ಕಾನೂನುಬದ್ಧ ಚಿಕಿತ್ಸಾಕ್ರಮಗಳ ಪೈಕಿ ಒಂದೆಂದು ಮಾನ್ಯತೆ ಪಡೆದಿದೆ.

	ಈ ಪದ್ಧತಿಯ ಜನಕ ಹಾನಿಮನ್ ಪ್ರಕಾರ ಆರೋಗ್ಯಸ್ಥಿತಿ ಹಳಿತಪ್ಪುವಿಕೆಯೇ ರೋಗ. ರೋಗವನ್ನು ಯಾಂತ್ರಿಕವಾಗಿ ದೇಹದಿಂದ ನಿರ್ಮೂಲಿಸಲು ಸಾಧ್ಯವಿಲ್ಲ. ರೋಗವನ್ನು ಬೇಗನೆ ವಿಶ್ವಾಸಾರ್ಹವಾಗಿಯೂ ಶಾಶ್ವತವಾಗಿಯೂ ವಾಸಿ ಮಾಡಬಲ್ಲ ಚಿಕಿತ್ಸಾಕ್ರಮ ಅತ್ಯುತ್ತಮವಾದದ್ದು. ಎಂದೇ, ಈ ಎಲ್ಲ ಗುಣಗಳುಳ್ಳದ್ದು ಸಮಗ್ರತಾದೃಷ್ಟಿಯ (ಹೋಲಿಸ್ಟಿಕ್) ಔಷಧೋಪಚಾರ ಪದ್ಧತಿ ಎಂದಾತ ನಂಬಿದ್ದ. ರೋಗಗಳಲ್ಲಿ ಎರಡು ಬಗೆ: ತಾತ್ಕಾಲಿಕವಾಗಿ ವ್ಯಕ್ತಿಯನ್ನು ಶಕ್ತಿಗುಂದಿಸುತ್ತದಾದರೂ ಯುಕ್ತ ಚಿಕಿತ್ಸೆಯಿಂದ ವಾಸಿಮಾಡಬಹುದಾದ ತೀವ್ರ ರೋಗ ಮತ್ತು   ಅನೇಕ ಬಾರಿ ರೋಗಬಾಧಿತನಾಗಿ ಅಪಾಯಕಾರಿ ಎನ್ನಬಹುದಾದಷ್ಟು ಶಕ್ತಿಗುಂದಿಸುವ ದೀರ್ಘಕಾಲಿಕ ರೋಗ. ಇಂಥ ರೋಗಗಳಿಗೆ ಚಿಕಿತ್ಸೆ ಮಾಡಬಯಸುವ ಹೋಮಿಯೊಪತಿ ವೈದ್ಯನಲ್ಲಿ ಇರಬೇಕಾದ ಸಾಮಥ್ರ್ಯಗಳು ನಾಲ್ಕು: 1. ವ್ಯಾಧಿಕಾರಣ ಜ್ಞಾನ, ರೋಗಲಕ್ಷಣ ಜ್ಞಾನ, ರೋಗದ ಮುಂದಿನ ಬೆಳೆವಣಿಗೆ ಜ್ಞಾನ ಹಾಗೂ ರೋಗನಿದಾನ ವಿಧಾನ ಜ್ಞಾನ. 2. ಔಷಧವಸ್ತುವಿನ ಔಷಧೀಯ ಸಾಮಥ್ರ್ಯ ಜ್ಞಾನ. 3. ರೋಗಿಯ ಸ್ಥಿತಿಗೆ ಔಷಧದ ಔಷಧೀಯ ಸಾಮಥ್ರ್ಯವನ್ನು ಅನ್ವಯಿಸುವ ಸಾಮಥ್ರ್ಯ. 4. ರೋಗಿ ರೋಗಮುಕ್ತನಾಗಲು ಇರುವ ಪ್ರತಿಬಂಧಕಗಳ ಮತ್ತು ಅವನ್ನು ನಿವಾರಿಸುವ ವಿಧಾನಗಳ ಜ್ಞಾನ. ರೋಗಗ್ರಸ್ತ ಭಾಗಕ್ಕೆ ಮಾತ್ರ ಚಿಕಿತ್ಸೆ ನೀಡುವುದಕ್ಕೆ ಬದಲಾಗಿ ರೋಗಿಯ ಸಮಗ್ರ ದೇಹಸ್ಥಿತಿಯನ್ನು ಪರಿಗಣಿಸಿ ಸಮಗ್ರಚಿಕಿತ್ಸೆ ನೀಡುವ ಗುರಿಸಾಧನೆಗೆ ಇವು ಅನಿವಾರ್ಯ.

	ತನಗೆ ತಗಲುವ ರೋಗಗಳನ್ನು ನಿವಾರಿಸಿಕೊಳ್ಳುವ ನೈಸರ್ಗಿಕಶಕ್ತಿ ದೇಹಕ್ಕೆ ಇದೆ ಎಂಬ ನಂಬಿಕೆಯನ್ನು ಆಧರಿಸಿ ಹೋಮಿಯೊಪತಿ ವೈದ್ಯ ಚಿಕಿತ್ಸೆ ನೀಡುತ್ತಾನೆ. ಚಿಕಿತ್ಸಾವಿಧಾನ ನಾಲ್ಕು ಮೂಲ ತತ್ತ್ವಗಳನ್ನು ಆಧರಿಸಿದೆ: 1. ಸದೃಶಗಳ ನಿಯಮ (ಲಾ ಆಫ್ ಸಿಮಿಲರ್ಸ್): ಸದೃಶಕ್ಕೆ ಸದೃಶವೇ ರೋಗಪರಿಹಾರಕ (ಲೈಕ್ ಕ್ಯೂರ್ಸ್ ಲೈಕ್, ಮೂಲ ರೂಪ: ಸಿಮಿಲಿಯ ಸಿಮಿಲಿಬಸ್ ಕ್ಯೂರೆಂಟರ್). ರೋಗಲಕ್ಷಣವನ್ನು ಉಂಟುಮಾಡಬಲ್ಲ ಔಷಧವಸ್ತು ರೋಗವನ್ನು ವಾಸಿ ಮಾಡುತ್ತದೆ ಇದು ಈ ನಿಯಮದ ತಿರುಳು. ಉದಾ: ನಿದ್ದೆ ಬಾರದಂತೆ ತಡೆಯಬಲ್ಲ ಕೆಫೀನ್ ನಿದ್ರಾಹೀನತೆಯನ್ನು ನಿವಾರಿಸಲೂಬಲ್ಲದು. ಆಧುನಿಕ ಔಷಧವಿಜ್ಞಾನ ಇದನ್ನು ಒಪ್ಪುವುದಿಲ್ಲ.  2.  ಸಾಮಥ್ರ್ಯವರ್ಧನಾ ನಿಯಮ (ಲಾ ಆಫ್ ಪೊಟೆನ್ಶಿಏಷನ್): ಔಷಧದ ಅಧಿಕ ಗುಟ್ಟಿಪ್ರಮಾಣದಿಂದ ರೋಗ ಉಲ್ಬಣಿಸುತ್ತದೆ, ಅಲ್ಪ ಗುಟ್ಟಿಪ್ರಮಾಣ ದೇಹದ ರಕ್ಷಣ ಯಂತ್ರತೆಯನ್ನು ಬಲಪಡಿಸುತ್ತದೆ ಅಥವಾ ಔಷಧಿಯ ಸಾರರಿಕ್ತತೆ ಹೆಚ್ಚಿದಂತೆಲ್ಲ ಅದರ ಫಲಕಾರಿತ್ವ ಹೆಚ್ಚುತ್ತದೆ. ಔಷಧದ ಸಾಮಥ್ರ್ಯ ಅದರ ಗುಣವನ್ನು ಆಧರಿಸಿದೆಯೇ ವಿನಾ ಗುಟ್ಟಿಪ್ರಮಾಣವನ್ನಲ್ಲ ಎಂಬುದು ಹೋಮಿಯೊಪತಿಯ ಬುನಾದಿ ನಂಬಿಕೆ. ಹೋಮಿಯೊಪತಿ ವೈದ್ಯರು ಸಾಧ್ಯವಿರುವಷ್ಟು ಸಾರರಿಕ್ತ ಔಷಧ ನೀಡುವುದರ, ಔಷಧದ ಸಾರರಿಕ್ತತೆಯನ್ನು ಕ್ರಮೇಣ ಬದಲಿಸುವುದರ ಹಾಗೂ ಸುದೀರ್ಘವಾದ ಅನುಶಾಶನ ವಿಧಿಸುವುದರ ಒಳಮರ್ಮ ಇದು. 3. ರೋಗವಾಸಿಯಾಗುವ ನಿಯಮ (ಲಾ ಆಫ್ ಕ್ಯೂರ್): ದೇಹದ ಮೇಲ್ಭಾಗದಿಂದ ಕೆಳಭಾಗದತ್ತ (ಶಿರಪದಾಭಿಮುಖವಾಗಿ), ಒಳಭಾಗದಿಂದ ಹೊರಭಾಗದತ್ತ (ಅಂತರ್ಬಾಹ್ಯಾಭಿಮುಖವಾಗಿ), ಪ್ರಮುಖ ಅಂಗದಿಂದ ಅಷ್ಟೇನೂ ಪ್ರಮುಖವಲ್ಲದ ಅಂಗದತ್ತ ಹಾಗೂ ರೋಗಲಕ್ಷಣಗಳು ಪ್ರಕಟವಾದ ಕ್ರಮಕ್ಕೆ ವಿರುದ್ಧ ಕ್ರಮದಲ್ಲಿ ರೋಗಪರಿಹಾರ ಮುಂದುವರಿಯುತ್ತದೆ. 4. ರೋಗಪರಿಹಾರ ಏಕತ್ವ ಔಷಧೀಕರಣ ನಿಯಮ (ಲಾ ಆಫ್ ಸಿಂಗಲ್ ರೆಮೆಡಿ ಮೆಡಿಕೇಶನ್): ಒಂದು ಬಾರಿಗೆ ಒಂದು ಔಷಧಿಯನ್ನು ಶುದ್ಧರೂಪದಲ್ಲಿ ನೀಡಬೇಕೇ ವಿನಾ ಏಕಕಾಲದಲ್ಲಿ ವಿಭಿನ್ನ ಔಷಧಿಗಳ ಮಿಶ್ರಣ ನೀಡಬಾರದು. 

	ಹೋಮಿಯೊಪತಿ ಪದ್ಧತಿಯ ಜನಕ ಹಾನಿಮನ್ ವಾಸ್ತವವಾಗಿ ಲೀಪ್‍ಝಿಗ್ ಮತ್ತು ವಿಯೆನ್ನದಲ್ಲಿ ವೈದ್ಯವಿಜ್ಞಾನ ಅಧ್ಯಯಿಸಿದ ಎಮ್.ಡಿ. ಪದವೀಧರ (1779). ವೈದ್ಯವೃತ್ತಿ ನಿರತನಾಗಿದ್ದ ಈತ ವಿಲಿಯಮ್ ಕಲ್ಲೆನ್‍ನ ಲೆಕ್ಚರ್ಸ್ ಆನ್ ಮ್ಯಾಟಿಅರಿಅ ಮೆಡಿಕವನ್ನು ಜರ್ಮನ್ ಭಾಷೆಗೆ ಭಾಷಾಂತರಿಸುವಾಗ (1790) ಅದರಲ್ಲಿ ಇದ್ದ ಯಾವ ರೋಗಲಕ್ಷಣ ಪರಿಹಾರಕವಾಗಿ ಕ್ವಿನೀನ್‍ನ ಬಳಕೆ ಇದೆಯೋ ಅದೇ ರೋಗಲಕ್ಷಣಗಳನ್ನು ಅದು ಆರೋಗ್ಯಯುತ ದೇಹದಲ್ಲಿ ಉತ್ಪಾದಿಸುತ್ತದೆ ಎಂಬ ಹೇಳಿಕೆಯಿಂದ ಪ್ರೇರಿತನಾಗಿ ಅನೇಕ ಪ್ರಯೋಗಗಳ ಮುಖೇನ ಹೋಮಿಯೊಪತಿ ಚಿಕಿತ್ಸಾಪದ್ಧತಿಯನ್ನು ಆವಿಷ್ಕರಿಸಿದ. ಅವನ ಪ್ರಯೋಗಗಳ ಪ್ರಯೋಗಪಶುಗಳು ಅವನು ಹಾಗೂ ಅವನ ಕುಟುಂಬದ ಸದಸ್ಯರು. ಆರ್ಗನನ್ ಡೆರ್ ರೇಶನೆಲ್ಲೆನ್ ಹೆಯಿಲ್‍ಕನ್‍ಸ್ಟ್ (ಆರ್ಗನನ್ ಆಫ್ ರೇಶನಲ್ ಮೆಡಿಸಿನ್) ಎಂಬ ಗ್ರಂಥ ಮುಖೇನ ತನ್ನ ಸಿದ್ಧಾಂತವನ್ನು ಪ್ರಕಟಿಸಿದ (1810). ಆರೋಗ್ಯವಂತರ ಮೇಲೆ ಔಷಧವಸ್ತುಗಳನ್ನು ವ್ಯವಸ್ಥಿತವಾಗಿ ಪ್ರಯೋಗಿಸಿದಾಗ (ಈ ತಂತ್ರಕ್ಕೆ ಆತ ನೀಡಿದ ಹೆಸರು ಪ್ರೂವಿಂಗ್) ಅವರಲ್ಲಿ ಕಾಣಿಸಿಕೊಂಡ ಲಕ್ಷಣಗಳನ್ನು ವಿವರವಾಗಿ ದಾಖಲಿಸಿ  ರೆಯ್ನೆ ಅರ್ಝ್‍ನೆಯ್ಮಿಟ್ಟೆಲೆಹ್ರೆ (ಶುದ್ಧ ಔಷಧಿ ಪ್ರಭಾವ ವಿಜ್ಞಾನ) ಎಂಬ ಹೆಸರಿನ 6 ಸಂಪುಟಗಳಲ್ಲಿ ಪ್ರಕಟಿಸಿದ (1811).	
				
					(ಕೆ.ಜಿ.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ